ದಿಲ್ಲಿ ಹೈಕೋರ್ಟಿನಿಂದ ಹೋಮೋಸೆಕ್ಷುಯಾಲಿಟಿ ಪರವಾದ ತೀರ್ಪು ಬಂದಾಗಿನಿಂದ ವಿವಿಧ ಧರ್ಮಗುರುಗಳು ಖಂಡನಾ ಹೇಳಿಕೆಗಳನ್ನು ನೀಡತೊಡಗಿದ್ದಾರೆ. ೧೮ ವರ್ಷ ಮೀರಿದ ವ್ಯಕ್ತಿಗಳ ನಡುವೆ ಸಮ್ಮತಿಸಿದ ಸಲಿಂಗರತಿ ಕಾನೂನುವಿರೋಧಿಯಲ್ಲ ಎನ್ನುವುದು ಹೈಕೋರ್ಟು ತೀರ್ಪಿನ ತಿರುಳು. ಇದರ ವಿವರಗಳನ್ನು ಚರ್ಚಿಸಲು ನಾನು ಹೋಗಲ್ಲ. ಬೇಕಾದ್ರೆ ನೀವು ಪ್ರತಾಪಸಿಂಹ ನಿನ್ನೆ (೨೦೦೯ ಜುಲೈ ೪) ಬರೆದ ಅಂಕಣ ಬರಹವನ್ನು ಓದಿ. ಈ ಅಂಕಣ ಬರಹವು ನಾನು ವಿಮರ್ಶಕಿಯಲ್ಲಿ ಸೆಕ್ಸ್ ಮತ್ತು ಜರ್ನಲಿಸಮ್ಮನ್ನು ಮಿಕ್ಸ್ ಮಾಡಿದ ಎರಡೇ ವಾರದಲ್ಲಿ ಪ್ರಕಟವಾಗಿರೋದು ನನ್ನ ಅದೃಷ್ಟವೋ, ಓದುಗರ ದುರದೃಷ್ಟವೋ ಗೊತ್ತಿಲ್ಲ.

ಹೆಡಿಂಗೇ ಪ್ರತಾಪಸಿಂಹರ ಗೊಂದಲವನ್ನು ಸ್ಪಷ್ಟವಾಗಿ ವ್ಯಕ್ತಪಡಿಸುತ್ತದೆ : ಸ್ವಚ್ಛಂದ ಕಾಮವನ್ನೇ ಒಪ್ಪದ ಸಮಾಜದಲ್ಲಿ ಸಲಿಂಗ ಕಾಮ? – ಈ ಹೆಡಿಂಗನ್ನು ಓದಿದ ನನಗೆ ಪ್ರತಾಪಸಿಂಹರು ಸ್ವಚ್ಛಂದ ಕಾಮದ ಪ್ರತಿಪಾದಕರು, ಆದರೆ ಈ ಸಮಾಜವು ಸ್ವಚ್ಛಂದ ಕಾಮವನ್ನು ಒಪ್ಪಿಲ್ಲ ಅಂಬೋ ಮೀನಿಂಗನ್ನ ಕೊಡ್ತು. ಲೇಖನದಲ್ಲಿ ಎಲ್ಲೂ ಹಾಗಂತ ಪ್ರತಾಪಸಿಂಹ ಬರೆದಿಲ್ಲ. ಸ್ವಚ್ಛಂದ ಕಾಮವನ್ನು ಸಮಾಜ ಯಾಕೆ ಒಪ್ಪಿಕೊಳ್ಳಬೇಕು? ಅಥವಾ ಸ್ವಚ್ಛಂದ ಕಾಮವನ್ನು ಒಪ್ಪಿಕೊಂಡರೆ ಸಲಿಂಗಕಾಮಕ್ಕೂ ವಿನಾಯ್ತಿ ನೀಡಲೇಬೇಕೆ? ಪ್ರತಾಪಸಿಂಹ ಸ್ವಲ್ಪ ಸ್ಪಷ್ಟನೆ ನೀಡ್ತೀರ?

ಇನ್ನು ಸಲಿಂಗಕಾಮದ ಬಗ್ಗೆ ಮನುಸ್ಮೃತಿಯಲ್ಲಿ ಬರೆದಿರೋ ಶಿಕ್ಷೆ ಅಬ್ರಾಹ್ಮಣರಿಗೆ. ಬ್ರಾಹ್ಮಣರು ಉಟ್ಟ ಬಟ್ಟೆಯಲ್ಲಿ ನದಿಯಲ್ಲಿ ಮಿಂದೆದ್ದರೆ ಸಾಕು, ಅವರು ಸಲಿಂಗಕಾಮದ ಅಪರಾಧದಿಂದ ಮುಕ್ತರಾಗುತ್ತಾರೆ ಎಂದು ಮನುಷ್ಮೃತಿ ಹೇಳುತ್ತೆ ಅಂತ ಪ್ರತಾಪಸಿಂಹರೇ ಬಹುತೇಕ ಕೋಟ್ ಮಾಡಿದ ವಿಕಿಪೀಡಿಯಾದಲ್ಲೇ ಬರೆದಿದೆ. ಆದ್ದರಿಂದ ಈ ಥರ ಸೆಲೆಕ್ಟಿವ್ ಕೋಟ್ ಮಾಡೋದನ್ನ, ಔಟ್ ಆಫ್ ಕಾನ್‌ಟೆಕ್ಸ್ಟ್ ಬರೆಯೋದನ್ನ ಯಾವಾಗ ನಿಲ್ಲಿಸ್ತೀರ?

ಭಾರತದಲ್ಲಿ ಇರೋ ಸಲಿಂಗಕಾಮಿಗಳ ಸಂಖ್ಯೆ ಇಷ್ಟು, ಅವರಿಗಾಗಿ ಯಾಕೆ ಬಹುಸಂಖ್ಯಾತರ ಕಾನೂನು ಬದಲಿಸಬೇಕು ಎಂದು ಪ್ರತಾಪಸಿಂಹ ಪ್ರಶ್ನಿಸಿದ್ದಾರೆ. ಛಲೋದೇ! ಡೆಮಾಕ್ರಸಿ ನಡೆಯೋದೇ ಹೀಗೆ ಅಂತ ಪ್ರತಾಪಸಿಂಹ ತಿಳಿದಿದ್ದಾರೆ. ಅವರ ಈ ವಾದವು ಪ್ರಜಾತಂತ್ರ ವಿರೋಧಿ. ಭಾರತದಲ್ಲಿ ಇರುವ ಪ್ರತಿಯೊಬ್ಬರಿಗೂ ಪ್ರತಿಯೊಂದೂ ಕಾನೂನು ಲಾಗೂ ಆಗಬೇಕು; ಅಷ್ಟೇ ಅಲ್ಲ, ಎಲ್ಲಾ ಕಾನೂನುಗಳೂ ಸಂವಿಧಾನದ ೧೪ನೇ ವಿಧಿಯ ಪ್ರಕಾರ ಸಮಾನವಾಗಿ ಎಲ್ಲ ಪ್ರಜೆಗಳಿಗೂ ದಕ್ಕಬೇಕು. ಪ್ರತಾಪಸಿಂಹ ಏನೇ ಹೇಳಿದರೂ ಈ ಸತ್ಯವನ್ನು ತಪ್ಪಿಸಲು ಸಾಧ್ಯವಿಲ್ಲ. ಶಾ ಬಾನೋ ಒಬ್ಬಳೇ ಹೋರಾಡಿದರೂ ನ್ಯಾಯಾಲಯ ಆಕೆಗೆ ಗೌರವ ನೀಡಿದೆ. ಅರುಣ್ ಶೌರಿ ತಂದೆಯವರ ಹೋರಾಟಗಳಿಗೂ ನ್ಯಾಯಾಲಯ ಸಮನಾಗಿ ಗೌರವ ನೀಡಿದೆ. ಎಷ್ಟೋ ಸಲ ಏಕ ವ್ಯಕ್ತಿಯ ಪ್ರತಿಪಾದನೆಯನ್ನು ಒಪ್ಪಿ ಸರ್ವೋಚ್ಚ ನ್ಯಾಯಾಲಯವೇ ದೇಶಕ್ಕೇ ಲಾಗೂ ಆಗೋವಂಥ ಕಾನೂನು ಮಾಡಿದೆ.

ಇಲ್ಲಿ (ಭಾರತದಲ್ಲಿ) ಸೆಕ್ಸ್ ಅಂದರೆ ಮಕ್ಕಳನ್ನು ತಯಾರಿಸುವ ಪ್ರಕ್ರಿಯೆ , ಇಲ್ಲವೇ ದೈಹಿಕ ತೃಷೆ ತೀರಿಸಿಕೊಳ್ಳುವ ಒಂದು ವಿಧಾನವೆಂಬಂತಿದೆ ಎಂದು ಪ್ರತಾಪಸಿಂಹ ಇಡೀ ದೇಶದ ಸೆಕ್ಸ್ ಬಗ್ಗೆ ಒಂದೇ ವಾಕ್ಯದ ವಿಶ್ಲೇಷಣೆ ನೀಡಿದ್ದಾರೆ. ಪ್ರತಾಪಸಿಂಹ, ಪ್ರಜನನವೇ ಮನುಷ್ಯನ ಡ್ಯೂಟಿ ಅಂತ ನಿರ್ಧರಿಸಿದ್ದು ಪ್ರಕೃತಿಯೇ ಹೊರತು ಭಾರತವಲ್ಲ. ಭಾರತದಲ್ಲಿ ನಾಗರಿಕ ವ್ಯವಸ್ಥೆ ಬಂದು ಸಾವಿರಾರು ವರ್ಷಗಳಾದವು. ಇಷ್ಟಾದ ಮೇಲೂ  ಇಲ್ಲಿ ನಡೆಯುವುದೆಲ್ಲ ಒಂದು ಯಾಂತ್ರಿಕ ಕ್ರಿಯೆ ಅಂತಲೇ ಜನ ತಿಳ್ಕೊಂಡಿದಾರೆ ಅಂತ ಹೇಳ್ತೀರಲ್ಲ, ನಿಮ್ಮ ಸಮಾಜಜ್ಞಾನಕ್ಕೆ ಏನಂತ ಕಾಮೆಂಟ್ ಮಾಡಬೇಕು? ಸೋ, ನಿಮ್ಮ ಪ್ರಕಾರ ಭಾರತದಲ್ಲಿ ಮಕ್ಕಳು ಹುಟ್ಟೋದೆಲ್ಲ ಯಾಂತ್ರಿಕವಾಗಿ; ಅಲ್ಲಿ ಯಾವುದೇ ಸ್ವಾರಸ್ಯವೂ ಇರಲ್ಲ ಅಂತಲಾ? ಸೆಕ್ಸ್‌ನ ಆರೋಗ್ಯಕರ, ಹಿತಾನುಭವ ಇಲ್ಲದೆ ಎಲ್ಲರೂ ಕೇವಲ ಯಾಂತ್ರಿಕವಾಗಿ ಸೆಕ್ಸ್ ಅನುಭವಿಸುತ್ತಾರೆ ಅಂತೀರಲ್ಲ, ನಿಮ್ಮ ಮೆಕ್ಯಾನಿಕಲ್ ಚಿಂತನೆಗೆ ಹ್ಯಾಗೆ ಕಾಮೆಂಟ್ ಮಾಡ್ಬೇಕು ಅನ್ನೋದೇ ಗೊತ್ತಾಗ್ತಿಲ್ಲ.

ಸಲಿಂಗಕಾಮಿಗಳ ವಿರುದ್ಧ ಹರಿಹಾಯಲು ಹೋಗಿ ಬುಡಕಟ್ಟು ಜನರ, ಪರಿಸರ ರಕ್ಷಣೆಯ ಆಂದೋಳನಗಳನ್ನೂ ತರಾಟೆಗೆ ತೆಗೆದುಕೊಂಡಿದ್ದೀರಿ. ಎಲ್ಲವೂ ಫ್ಯಾಡ್ ಎಂದು ಹೀಗಳೆಯುವ ನಿಮಗೆ ಹಿಂಥಾ ಶುದ್ಧಾಂಗ ಹೀಗಳಿಕೆಯ ಅಂಕಣ ಬರೆಯುವುದೇ ಒಂದು ಫ್ಯಾಡ್ ಇರಬಹುದೆ? ನಿಮ್ಮ ಅಂಕಣ ತುಂಬಾ ಜನಪ್ರಿಯವಾಗಿರಬಹುದು; ಆದರೆ ಸ್ವೀಪಿಂಗ್ ಸ್ಟೇಟ್‌ಮೆಂಟ್‌ಗಳನ್ನು ಕೊಡೋದ್ರಿಂದ ಯಾವ ಪ್ರಯೋಜನವೂ ಇಲ್ಲ.

ಇವತ್ತು (july 5) ಸೋಲಿ ಸೊರಾಬ್ಜಿ ‘ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್’ನಲ್ಲಿ ಬರೆದ ಲೇಖನವನ್ನು ಓದಿಯಾದರೂ ನಿಮಗೆ ಒಂದಷ್ಟು ಸಹನೆ ಮೂಡೀತೆಂದು ಆಶಿಸಬಹುದೆ?

ನೀವು ‘ಸ್ವಚ್ಛಂದ ಕಾಮವನ್ನೇ ಒಪ್ಪದ’ ಅಂತ ಬರ್‍ಯೋ ಬದಲಿಗೆ ‘ ದ್ವಿಲಿಂಗ ಕಾಮವೇ ಸರೂತ ಇಲ್ಲ, ಇನ್ನು ಸಲಿಂಗ ಕಾಮ ಬೇಕಾ?’ ಅಂತೇನಾದ್ರೂ ಬರೆದಿದ್ದರೆ, ವಿಮರ್ಶಕಿ ನಿಮ್ಮನ್ನು ಹಾಡಿ ಹೊಗಳುತ್ತಿದ್ದಳು. ಭಾರತದಲ್ಲಿ ಇವತ್ತು ಬೇಕಾಗಿರೋದು ಆರೋಗ್ಯಕರ ಮತ್ತು ಸುರಕ್ಷಿತ ದ್ವಿಲಿಂಗ ಕಾಮದ ಶಿಕ್ಷಣ. ದಟ್ಸ್‌ಕನ್ನಡ ಡಾಟ್‌ಕಾಮ್‌ನಲ್ಲಿ ಬರೋ ರೋಚಕ ಲೇಖನಗಳೂ ಅಲ್ಲ; ಪೋರ್ನ್ ಕಥೆಗಳೂ ಅಲ್ಲ.

ನಾನು ಬರೆದ ಎಲ್ಲ ಸೆಕ್ಸ್ ಲೇಖನಗಳೂ ಶಿಕ್ಷಣವನ್ನೇ ಗುರಿಯಾಗಿಸಿಕೊಂಡಿವೆಯೇ ಹೊರತು ಯಾವ ಬಗೆಯ ಪ್ರಚೋದನೆಯನ್ನೂ ಕೊಡಹೋಗಿಲ್ಲ.

ಆದ್ದರಿಂದ ದ್ವಿಲಿಂಗ ಕಾಮದ ಅವ್ಯವಸ್ಥೆ, ಈಗಿನ ಸಮಾಜದಲ್ಲಿ ದ್ವಿಲಿಂಗ (ಮತ್ತು ಏಕೈಕ ಸಂಗಾತಿಯ ಜೊತೆಗಿನ ದ್ವಿಲಿಂಗ ಕಾಮ ಮಾತ್ರ) ಕಾಮದ ಅನುಭವಕ್ಕೆ ಇರೋ ಅಡೆತಡೆಗಳು, ಸಾಮಾಜಿಕ ಗೊಂದಲಗಳು, ಅಸುರಕ್ಷಿತ, ಅನಾರೋಗ್ಯಕರ ಸನ್ನಿವೇಶಗಳು – ಈ ಬಗ್ಗೆ ಚರ್ಚಿಸೋಣ. ಇದರಲ್ಲಿ ಯಾವ ತಪ್ಪೂ ಇಲ್ಲ.  ಲೈಂಗಿಕ ಶಿಕ್ಷಣದ ಲೇಖನಗಳನ್ನೇ ಪೋರ್ನ್ ಎಂದು ಕರೆಯುವ ಕಾಮೆಂಟಿಗರ ಬಗ್ಗೆ ನನಗೆ ಏನೂ ಹೇಳಬೇಕಿಲ್ಲ. ಸುಧಾದಲ್ಲಿ ಲೈಂಗಿಕ ಶಿಕ್ಷಣದ ಹೆಸರಿನಲ್ಲಿ ಬರೋ ಶಿಶ್ನ ಸಂಬಂಧೀ / ಮುಷ್ಟಿಮೈಥುನ ಪರ ಪ್ರಶ್ನೋತ್ತರಗಳಿಗಿಂತ ನನ್ನ ಲೇಖನಗಳು ವಾಸಿ ಅಂತ ನನಗೆ ನಾನೇ ಬೆನ್ನು ತಟ್ಟಿಕೊಳ್ತಿದೇನೆ!