ಈಗ ಉಳಿದಿರೋದು ಒಂದೇ : ಪತ್ರಕರ್ತರ ಆಸ್ತಿ ವಿವರ ಪ್ರಕಟಣೆ

ಆಗಷ್ಟ್ 27, 2009

ನಮ್ಮ ನಾಡಿನ ಹಿರಿಯ ಹುದ್ದೆಗಳಲ್ಲಿ ಇರುವ ಪತ್ರಕರ್ತರು ಸಾರ್ವಜನಿಕ ಹಿತಾಸಕ್ತಿಯಿಂದ ಸ್ವಯಂಪ್ರೇರಿತರಾಗಿ ತಮ್ಮ ಆಸ್ತಿ ವಿವರಗಳನ್ನು ಪ್ರಕಟಿಸುವುದು ಯಾವಾಗ? ಕಳೆದ ವಾರ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನಲ್ಲಿ ಬಂದ ನ್ಯಾಯಮೂರ್ತಿ ಶ್ರೀ ಶೈಲೇಂದ್ರಕುಮಾರ್ ಲೇಖನಗಳನ್ನು ಓದುತ್ತಿದ್ದಾಗಲೇ ಈ ಪ್ರಶ್ನೆ ನನ್ನೊಳಗೆ ಮೂಡಿತ್ತು. ಈಗ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳೂ ಸೇರಿದಂತೆ ಎಲ್ಲ ನ್ಯಾಯಮೂರ್ತಿಗಳೂ ತಮ್ಮ ಆಸ್ತಿ ವಿವರಗಳನ್ನು ಸುಪ್ರೀಂ ಕೋರ್ಟ್ ವೆಬ್‌ಸೈಟಿನಲ್ಲಿಯೇ ಪ್ರಕಟಿಸಲು ಮುಂದಾಗಿದ್ದಾರೆ. ಈ ಕ್ರಮಕ್ಕೆ ಕಾರಣವಾದ ಲೇಖನ ಪ್ರಕಟಿಸಿದ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಗೆ ದೊಡ್ಡ ಥ್ಯಾಂಕ್ಸ್ ಹೇಳಲೇಬೇಕು. ದೇಶದಲ್ಲಿ ಈ ಬಗ್ಗೆ ಚರ್ಚೆ ನಡೆಯುತ್ತಿದ್ದರೂ ಇದಕ್ಕೆ ಪ್ರಮುಖ ಚಾಲನೆ ನೀಡಿದ್ದು ಈ ಲೆಖನವೇ. ಲೇಖನ ಬರೆದ ಶೈಲೇಂದ್ರಕುಮಾರ್ ನಿಜಕ್ಕೂ ನಮ್ಮೆಲ್ಲರ ಅಭಿನಂದನೆಗೆ ಪಾತ್ರರು.

ಮಾಧ್ಯಮರಂಗವು ಪ್ರಜಾತಂತ್ರದ ನಾಲ್ಕನೇ ಆಧಾರಸ್ತಂಭ ಎಂದೇ ಎಲ್ಲರೂ ಕರೆಯುತ್ತಾರೆ. ಹೀಗೆ ಕರೆಯುವುದಕ್ಕೆ ದೊಡ್ಡ ಇತಿಹಾಸವೇ ಇದೆ. ಭಾರತದಲ್ಲಿ ಮಾಧ್ಯಮವು ಪ್ರಜಾತಂತ್ರದ ರಕ್ಷಣೆಯಲ್ಲಿ ವಹಿಸುತ್ತಿರುವ ಪಾತ್ರವನ್ನು ಯಾರೂ ತೆಗೆದು ಹಾಕುವಂತಿಲ್ಲ. ಕಳೆದ ವರ್ಷ ಕರ್ನಾಟಕದಲ್ಲಿ ಸಕಾಲಕ್ಕೆ ಸರಿಯಾಗಿ ವಿಧಾನಸಭಾ ಚುನಾವಣೆ ನಡೆಯಲು ‘ದಿ ಹಿಂದೂ’ ಪತ್ರಿಕೆಯ ವಿಶ್ಲೇಷಣಾ ಸುದ್ದಿಯೇ ಪ್ರಮುಖ ಕೆಟಲಿಸ್ಟ್ ಆಗಿತ್ತು ಎನ್ನುವುದನ್ನು ಮರೆಯಲಾಗದು. ಈಗಿನ ಸರ್ಕಾರವು ಕೊಟ್ಟ ಭಾಷೆಯೇನು ಎಂದು ಮತ್ತೆ ಮತ್ತೆ ಮುಷ್ಟಿ ಬಿಗಿದು ಕೇಳಿದ ‘ವಿಜಯ ಕರ್ನಾಟಕ’ದ ಪ್ರಶ್ನೆಗಳಿಗೆ ಮುಖ್ಯಮಂತ್ರಿಯವರೇ ಸ್ಪಂದಿಸಿ ಕೊಟ್ಟ ಮಾತಿನಂತೆ ನಡೆಯುವುದಾಗಿ ಮತ್ತೊಮ್ಮೆ ಭರವಸೆ ನೀಡಿರುವುದನ್ನೂ ಇಲ್ಲಿ ನೆನಪಿಸಿಕೊಳ್ಳಬಹುದು. ಇವೆಲ್ಲ ಈಗಿನ ಕೆಲವು ಅತಿಚಿಕ್ಕ ಉದಾಹರಣೆಗಳು.

ಈಗ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗದ ಮುಖ್ಯಸ್ಥರು ತಮ್ಮ ಆಸ್ತಿ ವಿವರಗಳನ್ನು ಪ್ರಕಟಿಸುತ್ತಿದ್ದಾರೆ. ಕಾರ್ಯಾಂಗದಲ್ಲಿ ಹಾಗೆ ಆಸ್ತಿ ವಿವರ ಪ್ರಕಟಿಸದವರ ವಿವರಗಳನ್ನು ಲೋಕಾಯುಕ್ತವು ಕಾಲಕಾಲಕ್ಕೆ ಪ್ರಕಟಿಸುತ್ತಿದೆ!

ನಾಲ್ಕನೆಯ ಆಧಾರಸ್ತಂಭವಾದ ಮಾಧ್ಯಮದ ಪ್ರಮುಖರು ತಮ್ಮ ಆಸ್ತಿಗಳನ್ನು ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸುವುದು ಯಾವಾಗ ಎಂಬುದೊಂದೇ ಪ್ರಶ್ನೆ ಈಗ ಉಳಿದುಕೊಂಡಿದೆ.

ಪತ್ರಕರ್ತರು ಹೇಗಿರಬೇಕು ಎಂಬ ಬಗ್ಗೆ ಹಲವು ನೀತಿ ಸಂಹಿತೆಗಳು ಜಾರಿಯಲ್ಲಿವೆ. ಏಶ್ಯಾ ದೇಶಗಳಲ್ಲಿ ಇರುವ ಮಾಧ್ಯಮ ಸಂಹಿತೆ, ಭಾರತೀಯ ಪ್ರೆಸ್ ಕೌನ್ಸಿಲ್ ಹೇಳಿದಂತೆ ಇರುವ ಪತ್ರಕರ್ತರ ನಡತೆ ಕುರಿತ ನೀತಿಗಳು, ಇವುಗಳೇನೋ ಅತ್ಯಂತ ಮುತುವರ್ಜಿಯಿಂದ ರೂಪಿಸಿದ ದಾಖಲೆಗಳು. ಆದರೆ ಇಲ್ಲೆಲ್ಲೂ ಆಸ್ತಿ ಪ್ರಕಟಣೆಯ ಬಗ್ಗೆ ಮಾತಿಲ್ಲ.

ಈ ಮಧ್ಯೆ ಎಕನಾಮಿಕ್ ಟೈಮ್ಸ್‌ನ ಆಡಳಿತ ಮಂಡಳಿಯು ತನ್ನ ಪತ್ರಕರ್ತ ಸಿಬ್ಬಂದಿಗಳ ಬಗ್ಗೆ ಒಂದು ನೀತಿಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿ ಮಾಡುತ್ತಿರುವುದಾಗಿ ಪ್ರಕಟಿಸಿ ಹಲವು ದಿನಗಳಾಗಿವೆ. ಈ ನೀತಿಯಲ್ಲಿ ತನ್ನ ಸಿಬ್ಬಂದಿ ಪತ್ರಕರ್ತರ ಹೂಡಿಕೆ ವಿಚಾರದಲ್ಲೂ ಆಡಳಿತ ಮಂಡಳಿಯು ನೀತಿಗಳನ್ನು ರೂಪಿಸಿರುವುದು ಅತ್ಯಂತ ಸ್ವಾಗತಾರ್ಹ. ಬಹುಶಃ ವಿಮರ್ಶಕಿಯ ಈ ಲೇಖನಕ್ಕೆ ಇದೇ ದಿಕ್ಸೂಚಿ.

ಪತ್ರಿಕೆಯಲ್ಲಿ ಸುದ್ದಿ ಪ್ರಕಟಿಸುವಾಗ ಯಾವುದೇ ಹಿತಾಸಕ್ತಿ ಇರಬಾರದು. ಹಾಗೆ ಲಾಭದಾಯಕ ಪ್ರಚಾರ ಪಡೆಯುವ ವ್ಯಕ್ತಿಗಳಿಂದ ಪತ್ರಕರ್ತರು ಯಾವುದೇ ಉಡುಗೊರೆಗಳನ್ನು ಸ್ವೀಕರಿಸಿರಬಾರದು ಎಂಬುದೇ ಸಾಮಾನ್ಯ ತಿಳಿವಳಿಕೆ.

ಈ ಎಲ್ಲ ಬೆಳವಣಿಗೆಗಳನ್ನು ನೋಡಿದಾಗ, ಆಸ್ತಿ ವಿವರ ಪ್ರಕಟಣೆಯ ಬಗ್ಗೆ ಪತ್ರಿಕಾ ಸಂಘಟನೆಗಳು, ಆಡಳಿತ ಮಂಡಳಿಗಳು (ಪ್ರಕಾಶಕರು) ಒಂದು ನೀತಿ ಸಂಹಿತೆಯನ್ನು ರೂಪಿಸಬಹುದು. ಈ ನೀತಿ ಸಂಹಿತೆಯಲ್ಲಿ ಏನಿರಬಹುದು ಎಂದು ವಿಮರ್ಶಕಿಯು ಈ ಕೆಳಗಿನಂತೆ ತನ್ನ ಅಭಿಪ್ರಾಯಗಳನ್ನು ವಿನಮ್ರವಾಗಿ ಮಂಡಿಸುತ್ತಿದ್ದಾಳೆ.

 

 • ಮಾಧ್ಯಮ ಕುರಿತ ಎಲ್ಲ ಸಂಘಟನೆಗಳೂ ಒಟ್ಟಾಗಿ ಸೇರಿ ಈ ನೀತಿ ಸಂಹಿತೆಯನ್ನು ರೂಪಿಸಿ ಸಹಮತ ವ್ಯಕ್ತಪಡಿಸಿ ಪ್ರಕಟಿಸಬೇಕು.
 • ಪ್ರತಿಯೊಂದೂ ಪತ್ರಿಕೆಯಲ್ಲಿ ಹಿರಿಯ ಉಪಸಂಪಾದಕರಿಂದ ಮೇಲ್ಪಟ್ಟ ಎಲ್ಲ ಸಂಪಾದಕೀಯ ಸಿಬ್ಬಂದಿಗಳ ಆಸ್ತಿ ವಿವರಗಳನ್ನು ಆಯಾ ಪತ್ರಿಕೆಗಳ ವೆಬ್‌ಸೈಟಿನಲ್ಲಿ ಪ್ರತ್ಯೇಕವಾಗಿ ಪ್ರಕಟಿಸಬೇಕು. ಉಳಿದಂತೆ ಎಲ್ಲಾ ಸಿಬ್ಬಂದಿಗಳ (ಸಂಪಾದಕೀಯ ಮತ್ತು ಸಂಪಾದಕೀಯೇತರ) ಆಸ್ತಿ ವಿವರಗಳನ್ನು ಆಡಳಿತ ಮಂಡಳಿಯು ಸಂಗ್ರಹಿಸಿ ಇಟ್ಟುಕೊಳ್ಳಬೇಕು. ಅನುಮಾನಾಸ್ಪದ ಸನ್ನಿವೇಶಗಳಲ್ಲಿ ಇತರೆ ಯಾವುದೇ ಸಿಬ್ಬಂದಿಯ ಆಸ್ತಿವಿವರಗಳನ್ನೂ ಪ್ರಕಟಿಸಲು ಆಡಳಿತ ಮಂಡಳಿಯು ಮಾಹಿತಿಯುಕ್ತವಾಗಿರಬೇಕು.
 • ಪತ್ರಿಕಾ ಸಂಘಟನೆಗಳು ಕಾಯ್ದೆ / ಸಂಹಿತೆ ಮಾಡುವ ಮುನ್ನವೇ, ಹಿರಿಯ ಪತ್ರಕರ್ತರು ತಮ್ಮ ಆಸ್ತಿ ವಿವರಗಳನ್ನು ತಮ್ಮ ಬ್ಲಾಗಿನಲ್ಲಿ ಪ್ರಕಟಿಸಬೇಕು. (ನ್ಯಾಯಮೂರ್ತಿ ಶೈಲೇಂದ್ರಕುಮಾರ್ ಮಾಡಿದ್ದೂ ಹೀಗೇನೇ ಅಲ್ಲವೆ?)
 • ಆಡಳಿತ ಮಂಡಳಿಯು ಸಾರ್ವಜನಿಕವಾಗಿ (ದಿ ಎಕನಾಮಿಕ್ ಟೈಮ್ಸ್ ಆಡಳಿತ ಮಂಡಳಿ ಪ್ರಕಟಿಸಿದಂತೆ) ಪ್ರಕಟಿಸಬೇಕು.
  ಎಲ್ಲ ಪತ್ರಕರ್ತರ ಸಂಘಟನೆಗಳೂ (ಪ್ರೆಸ್ ಕ್ಲಬ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಪ್ರೆಸ್‌ಗಿಲ್ಡ್, ಇತ್ಯಾದಿ) ತಮ್ಮ ಸದಸ್ಯರ ಆಸ್ತಿ ವಿವರಗಳನ್ನು ಸಂಗ್ರಹಿಸಿ ಇಟ್ಟುಕೊಂಡಿರಬೇಕು.
 • ಆಸ್ತಿ ವಿವರವನ್ನೇ ಆಧಾರ ಮಾಡಿಕೊಂಡು ವಿವಾದ ಹುಟ್ಟಿಸುವುದರಿಂದ ಪತ್ರಕರ್ತರಿಗೆ ರಕ್ಷಣೆ ಬೇಕಾಗುತ್ತದೆ. ಆದ್ದರಿಂದ ಈ ಬಗ್ಗೆ ಪ್ರೆಸ್ ಕೌನ್ಸಿಲ್ ಕೂಡಾ ಒಂದು ರಕ್ಷಣಾತ್ಮಕ ನೀತಿಸೂತ್ರಗಳನ್ನು ರಚಿಸಬೇಕು. ಸೂಕ್ತ ವಿಚಾರಣೆ ಮಾಡಿ ಈ ಬಗೆಯ ವ್ಯಾಜ್ಯಗಳ ಬಗ್ಗೆ ತೀರ್ಮಾನ ಕೊಡಬೇಕು. ಪ್ರೆಸ್ ಕೌನ್ಸಿಲ್‌ಗೆ ಈ ನಿಟ್ಟಿನಲ್ಲಿ  (ಮತ್ತು ಇನ್ನೂ ಹಲವು ಕೊರತೆಗಳ, ಲೋಪದೋಷಗಳ ಹಿನ್ನೆಲೆಯಲ್ಲಿ) ಇನ್ನಷ್ಟು ನ್ಯಾಯಾಧಿಕರಣದ ಹಕ್ಕುಗಳನ್ನು ಕೊಡಬೇಕು.
 • ಪ್ರತೀ ವರ್ಷವೂ ಹಿರಿಯ ಪತ್ರಕರ್ತರು ತಮ್ಮ ಆಸ್ತಿ ವಿವರಗಳನ್ನು ಪ್ರಕಟಿಸಬೇಕು. ಆಡಳಿತ ಮಂಡಳಿಗಳೂ ಹೀಗೆ ವರ್ಷಕ್ಕೊಮ್ಮೆ ತಮ್ಮ ಲೆಕ್ಕಪರಿಶೋಧಿತ ಆಸ್ತಿ ವಿವರಗಳನ್ನು ಪ್ರಕಟಿಸಬೇಕು.
 • ಯಾವುದಾದರೂ ಸುದ್ದಿಯಲ್ಲಿ ಪತ್ರಕರ್ತರು ಆಮಿಷಕ್ಕೆ ಒಳಗಾಗಿದ್ದಾರೆ ಎಂದು ಯಾವುದೇ ಓದುಗನಿಗೆ ಅನ್ನಿಸಿದ್ದರೆ ಅದರ ಬಗ್ಗೆ ಸಾರ್ವಜನಿಕ ಹಿತಾಸಕ್ತಿಯಲ್ಲಿ ಪ್ರೆಸ್ ಕೌನ್ಸಿಲ್‌ಗೆ ದೂರು ನೀಡಲು ಯಾವುದೇ ಓದುಗನಿಗೆ ಸ್ವಾತಂತ್ರ್ಯ ಇರಬೇಕು. ಕೇವಲ ಬಾಧಿತ ವ್ಯಕ್ತಿ/ ಸಂಸ್ಥೆಗಳು ಮಾತ್ರವಲ್ಲ. (ಮಾನನಷ್ಟ ಮೊಕದ್ದಮೆಗಳ ಹಾಗೆ ಸಾಮಾನ್ಯವಾಗಿ ಪ್ರೆಸ್ ಕೌನ್ಸಿಲ್‌ನಲ್ಲಿ ಬಾಧಿತ / ಸುದ್ದಿ ಸಂಬಂಧಿತ ವ್ಯಕ್ತಿಗಳು ಮಾತ್ರವೇ ದೂರು ಸಲ್ಲಿಸಬೇಕು).
 • ಮಾಧ್ಯಮರಂಗವನ್ನು ಪ್ರಜಾತಂತ್ರದ ನಾಲ್ಕನೇ ಆಧಾರಸ್ತಂಭ ಎಂದು ಸಾರ್ವತ್ರಿಕವಾಗಿ ಒಪ್ಪಿಕೊಳ್ಳಲಾಗಿದೆ ಎಂಬ ನಂಬುಗೆಯಿಂದ ಈ ಸಲಹೆಗಳನ್ನು ವಿಮರ್ಶಕಿ ನೀಡಿದ್ದಾಳೆ. ಪತ್ರಿಕೆಗಳೇನೋ ಎಲ್ಲ ರಾಜಕಾರಣಿಗಳ ಆಸ್ತಿಗಳ ಬಗ್ಗೆ, ನ್ಯಾಯಾಧೀಶರ ಕುರಿತ ಕಾಯ್ದೆಯ ಬಗ್ಗೆ, ಅಧಿಕಾರಿಗಳ ಮನೆಗಳ ಮೇಲಿನ ಲೋಕಾಯುಕ್ತ ರೈಡ್‌ಗಳ ಬಗ್ಗೆ ಬರೆಯಬಹುದು; ಆದರೆ ಮಾಧ್ಯಮದ ಸಿಬ್ಬಂದಿ – ಅಧಿಕಾರಿಗಳು (ಸಂಪಾದಕೀಯ ಮತ್ತು ಸಂಪಾದಕೀಯೇತರ) ಹೊಂದಿದ ಆಸ್ತಿಯ ಬಗ್ಗೆ ಯಾರು ಮಾಹಿತಿ ನೀಡಬೇಕು? ಅವು ಎಲ್ಲಿ ಪ್ರಕಟವಾಗಬೇಕು?

ದೇಶ ಹೇಗಿರಬೇಕು, ಯಾರು ಹೇಗೆ ನಡೆದುಕೊಳ್ಳಬೇಕು, ಪಕ್ಷಗಳು ತಮ್ಮ ಸಿದ್ಧಾಂತವನ್ನು ಹೇಗೆ ಶುದ್ಧವಾಗಿ ಇಟ್ಟುಕೊಳ್ಳಬೇಕು, ಅಧಿಕಾರಿಗಳು ಹೇಗೆ ಪ್ರಾಮಾಣಿಕರಾಗಿರಬೇಕು, ಯಾವ ತೀರ್ಪು ಸರಿ, ಯಾವ ತೀರ್ಮಾನ ದೋಷಪೂರಿತ, ಯಾವ ರಾಜಕಾರಣಿಗೆ ಗೆಲುವು ನಿಶ್ಚಿತ, ಯಾರು ಮಣ್ಣು ಮುಕ್ಕುತ್ತಾರೆ, ಯಾವ ಮಂತ್ರಿ ಹಗರಣ ಮಾಡಿದ್ದಾನೆ, ಯಾವ ಲ್ಯಾಂಡ್ ಮಾಫಿಯಾಗೆ ಯಾರು ಕುಮ್ಮಕ್ಕು, ಯಾವ ಕಾಯ್ದೆ ಸರಿ, ಯಾವುದು ತಪ್ಪು, ಸರ್ಕಾರ ಏನು ಮಾಡಬೇಕು, ಮಾಡಬಾರದು, ಓದುಗರು ಏನು ಖರೀದಿಸಬೇಕು, ಯಾವ ಉತ್ಪನ್ನ ಹೇಗಿದೆ, ಅವರು ಹೇಗೆ ಬಾಳಬೇಕು, ಬದುಕಬೇಕು……… ಎಲ್ಲವನ್ನೂ ಅತ್ಯಂತ ಕಾಳಜಿಯಿಂದ ಬರೆಯುವ ಪತ್ರಕರ್ತರು, ಪ್ರಕಾಶನ ಮಾಡುವ ಮಾಧ್ಯಮ ಸಂಸ್ಥೆಗಳು  ತಮ್ಮ ಆಸ್ತಿ ವಿವರಗಳನ್ನು ಪ್ರಕಟಿಸಿದರೆ ಓದುಗರಲ್ಲಿ ಪತ್ರಿಕೆಗಳ ಬಗ್ಗೆ, ಪತ್ರಕರ್ತರ ಬಗ್ಗೆ ವಿಶ್ವಾಸ ಹೆಚ್ಚುತ್ತದೆ.

ಬಹುಶಃ ಇಂಥ ಕ್ರಮವನ್ನು ನಾಡಿನ ಪ್ರಮುಖ ಕನ್ನಡ ಪತ್ರಿಕೆಗಳ ಸಂಪಾದಕರುಗಳು ಕೂಡಲೇ ಕೈಗೊಂಡು, ಆಸ್ತಿ ವಿವರಗಳನ್ನು ಪ್ರಕಟಿಸಿ ದೇಶಕ್ಕೇ ಒಂದು ಮಾದರಿಯಾಗಬಹುದು.  ಎಷ್ಟೆಂದರೂ ನ್ಯಾಯಮೂರ್ತಿ ಕಣ್ಣನ್ ಜೊತೆಗೂಡಿ ಈ ವಿಷಯದ ಬಗ್ಗೆ ಚಳವಳಿ ರೂಪದ ಅಭಿಪ್ರಾಯವನ್ನು ರೂಪಿಸಿದ್ದೂ ನಮ್ಮ ನಾಡಿನ ನ್ಯಾಯಮೂರ್ತಿಗಳೇ ಅಲ್ಲವೆ?

Advertisements

8 Responses to “ಈಗ ಉಳಿದಿರೋದು ಒಂದೇ : ಪತ್ರಕರ್ತರ ಆಸ್ತಿ ವಿವರ ಪ್ರಕಟಣೆ”


 1. ಹಲೋ,

  ಈ ಲೇಖನವನ್ನು ಯಥಾವತ್ತಾಗಿ ದಟ್ಸ್ ಕನ್ನಡದಲ್ಲಿ ಪ್ರಕಟಿಸುವ ಇಚ್ಛೆ ಇದೆ. ವಿಮರ್ಶಕಿ ಏನನ್ನುತ್ತಾರೆ?ಸದ್ಯಕ್ಕೆ ಪತ್ರಕರ್ತರು ಆಮೇಲೆ ಪೊಲೀಸ್ ಅಧಿಕಾರಿಗಳು ತಮ್ಮ ಆಸ್ತಿ ವಿವರ ಪ್ರಕಟಿಸುವಂತಾಗಿ, ದೇಶಕ್ಕೇ ಕರ್ನಾಟಕ ಮಾದರಿಯಾಗಲಿ.

  ಉತ್ತರದ ನಿರೀಕ್ಷೆಯಲ್ಲಿ, ಶಾಮ್
  Vimarshaki writes: Dear Shami, you can certainly publish this article in thatskannada. Thanks for a positive response despite my harsh comments on the short story section of thatskannada!! I know your objectivity and inevitability. You are most welcome to use the article, as this would enhance my credibility, rather than your website’s!! Anonimity is maintained to have a objective analysis, nothing more, nothing less.
  We shall be in touch.


  • ಮಾನ್ಯರೆ,
   ನಾವೀರ್ವರು ಪರಸ್ಪರ ಈ ವೇದಿಕೆಯಲ್ಲಿ ಮಾತಾಡಿಕೊಂಡಂತೆ ಆಸ್ತಿ ವಿವರ ಘೋಷಣೆ ಲೇಖನವನ್ನು ದಟ್ಸ್ ಕನ್ನಡದ ಮೂಲಕ ಪ್ರಸಾರ ಮಾಡಲಾಗಿದೆ. ಈ ಕೊಂಡಿಯಲ್ಲಿ ಕಾಣಿರಿ [http://thatskannada.oneindia.in/mixed-bag/blogs/2009/1021-journalists-asset-declaration-manual.html]

   ವಂದನೆ

   -ಶಾಮ್


 2. ವಿಮರ್ಶಕಿಯ ಈ ವಾಧಕ್ಕೆ ನನ್ನ ಸಂಪೂರ್ಣ ಬೆಂಬಲ ಇದೆ, ಯಾಕಂದರೆ ಪತ್ರಿಕೋದ್ಯಮ ಈಗ ಶೀಲವನ್ನೇನು ಉಳಿಸಿಕೊಂಡಿಲ್ಲ. ನ್ಯಾಯಮೂರ್ತಿಗಳ ಆಸ್ತಿ ಘೋಷಣೆ ಆಗುವುದಾದರೆ ಪತ್ರಿಕೆ ಮತ್ತು ಇತರ ಮೀಡಿಯಾ ಹೆಡ್ ಗಳು ಆಸ್ತಿ ಘೋಷಣೆ ಮಾಡಿಕೊಳ್ಳಬೇಕು. ಅಷ್ಟೇ ಅಲ್ಲ ಮೀಡಿಯಾ ಕಂಪನಿಗಳನ್ನು ನಡೆಸುವ ಓಡೆಯರೂ ಘೋಷಣೆ ಮಾಡಿಕೊಂಡರೆ ಒಳ್ಳೇಯದು. ವಿಮರ್ಶಕಿಯ ಈ ಲೇಖನಕ್ಕೆ ನನ್ನ ಸಂಪೂರ್ಣ ಬೆಂಬಲ ಇದೆ.

 3. surendra Says:

  Good suggestion. There are few crorepaties in Kannada journalism, I mean Journalists. These people should come under Lokayukta scanner. Because, they sit on top of the mountain and preach the society of do’s and don’ts. They grab every opportunity to accumulate money from politicians and those who give money for publicity. Thank you, Anamika

 4. anonymous Says:

  ಒಂದು ಸೈಟ್ ಬೇಕಾದರೂ ಸರಕಾರದ ಬಾಲ ಹಿಡಿಯುವ ಪತ್ರಕರ್ತರು ಇದನ್ನೇಲ್ಲಾ ಮಾಡಲು ಸಾಧ್ಯವೇ?! ಎಲ್ಲರನ್ನೂ ಹೆದರಿಸಿ ದುಡ್ಡು ಮಾಡುವುದು ಮಾತ್ರ ಗೊತ್ತು ಇವರಿಗೆ…ನಮ್ಮ ರಾಜ್ಯದ ಎಷ್ಟು ಪತ್ರಿಕೆಗಳು ನೀಟಾಗಿ ತಮ್ಮ ವೆಬ್ ಸೈಟ್ ಅನ್ನು ಮೆಂಟೆನ್ ಮಾಡ್ತಾ ಇದ್ದಾರೆ? ತಮ್ಮ ವೆಬ್ ಸೈಟ್ ಗಳನ್ನೇ ನೀಟಾಗಿ ಇಟ್ಟುಕೊಳ್ಳದವರಿಂದ ಆಸ್ತಿ ವಿವರ ಅಸಾಧ್ಯಾ!! ಒಳ್ಳೆ ಬರಹ ಹೀಗೆ ಬರೀತಾ ಇರು

  • sahana Says:

   Very good suggestion. Let Editors start first. Then Resident editors, Chief reporters will follow..

   • Vishwanath Says:

    ಲೋಕಾಯುಕ್ತರು ಒಂದಾದ ಮೇಲೊಂದರಂತೆ ತಿಮಿಂಗಲುಗಳನ್ನು ಹಿಡಿಯುತ್ತಿದ್ದಾಗಲೇ ಸರಕಾರಿ ಅಧಿಕಾರಿಗಳು ಮಾತ್ರ ಭ್ರಷ್ಟರೇ, ದುಡ್ಡಿಗಾಗಿ ಅಕ್ಷರ ಮಾರಿಕೊಳ್ಳುತ್ತಿರುವವರು “ಗಳಿಸಿರುವ” ಆಸ್ತಿ ಬಗ್ಗೆ ಲೋಕಾಯುಕ್ತರೇಕೆ ಗಮನ ಹರಿಸುತ್ತಿಲ್ಲ ಎಂಬ ಪ್ರಶ್ನೆ ನನ್ನನ್ನು ಕಾಡಿದ್ದುಂಟು.

    ಕೇವಲ 2-3 ಸಾವಿರ ರೂಪಾಯಿ ಸಂಬಳ ಪಡೆದು ಕಾರಿನಲ್ಲಿ ಬರುವ ಕಸುಬುದಾರರನ್ನು ನಾನು ಬೆಂಗಳೂರಿನಲ್ಲಿ ನೋಡಿದ್ದೇನೆ. ಇವರಿಗೆ ಇಷ್ಟೆಲ್ಲ ಹಣ ಬಂದಿದ್ದು ಎಲ್ಲಿಂದ?

    ಮುಖ್ಯಮಂತ್ರಿ ಹೀಗೆ ಮಾಡಬೇಕು, ಈ ಸೂತ್ರಗಳನ್ನು ಪಾಲಿಸಬೇಕು, ಇಂಥವರನ್ನು ಕೈಬಿಡಬೇಕು, ಇಂಥವರನ್ನು ಕೈ ಹಿಡಿಯಬೇಕು ಎಂದು ನಮ್ಮ ಪತ್ರಕರ್ತರು ಪುಂಖಾನುಪುಂಖವಾಗಿ ಸಲಹೆ ಕೊಡುತ್ತಿದ್ದಾರೆ. ಆದರೆ ಇವರದೇ ನೇತೃತ್ವದ ಪತ್ರಿಕೆಯಲ್ಲಿ ತಮ್ಮ ಕೈಕೆಳಗೆ ದುಡಿಯುವ ಎಷ್ಟು ಜನ ಪರ್ತಕರ್ತರಿಗೆ ನ್ಯಾಯಯುತ ಸಂಬಳ ಕೊಡಿಸುವಲ್ಲಿ ಇವರು ಪತ್ರಿಕೆಯ ಆಡಳಿತ ಮಂಡಳಿಯ ಜತೆ ನಿಷ್ಠುರವಾಗಿ ಮಾತನಾಡಿದ್ದಾರೆ? ಆರೇಳು ವರ್ಷ ಅನುಭವವಿರುವ ಪತ್ರಕರ್ತರಿಗೆ ಇವರು ಕೊಡುವ ಸಂಬಳ 10-12 ಸಾವಿರ ರೂಪಾಯಿ. ಈ ಸಂಬಳದಲ್ಲಿ ಬೆಂಗಳೂರಿನಂಥ ಊರಿನಲ್ಲಿ ಮೂರ್ನಾಲ್ಕು ಜನ ಇರುವ ಪುಟ್ಟ ಸಂಸಾರ ದುಬಾರಿ ಬಾಡಿಗೆ ಕೊಟ್ಟು, ದಿನಕ್ಕೆ ಮೂರು ಹೊತ್ತು ಉಣ್ಣಲು ಸಾಧ್ಯವೇ? ಸಂಬಳ ಹೆಚ್ಚಿಸಲು ಅಲವತ್ತುಕೊಂಡರೆ, “ಹೌದು ನಿಮ್ಮ ಸಮಸ್ಯೆ ಅರ್ಥವಾಗ್ತದೆ, ಆದರೆ ಮ್ಯಾನೇಜ್ ಮೆಂಟ್ ಇದಕ್ಕೆ ಒಪ್ಪಲ್ಲ” (ನಿಮ್ಮ ಪರವಾಗಿ ನನಗೆ ಮಾತನಾಡಲು ಇಷ್ಟವಿಲ್ಲ ಎನ್ನುವುದನ್ನೇ ನೈಸ್ ಆಗಿ ಅವರು ಹೇಳುವುದು ಹೀಗೆ). ಎಂಬ ಉತ್ತರ ಬರುತ್ತದೆ. ತಮ್ಮ ಕುರ್ಚಿಯಿಂದ ಹತ್ತು ಮೀಟರ್ ಫಾಸಲೆಯಲ್ಲಿ ಕುಳಿತುಕೊಳ್ಳುವ ಸಹೋದ್ಯೋಗಿಗೇ ನ್ಯಾಯಯುತ ಸಂಬಳ ಕೊಡಿಸಲು ಸಾಧ್ಯವಾಗದ ವ್ಯಕ್ತಿ ಮುಖ್ಯಮಂತ್ರಿಗೆ, ಸರಕಾರಕ್ಕೆ, ಸಚಿವರಿಗೆ ಬಿಟ್ಟಿ ಸಲಹೆ ಕೊಡುತ್ತಾರೆಂದರೆ ಇದಕ್ಕೆ ಏನೆನ್ನಬೇಕು? ಇನ್ನು ಇವರ ಮನೆಯೋ ಯಾವ ಸಚಿವರ ನಿವಾಸಕ್ಕಿಂತಲೂ ಕಮ್ಮಿ ಇರುವುದಿಲ್ಲ.

    ದಿನ ಬೆಳಗಾದರೆ ಸರಕಾರವನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡು ಯಾವುದೋ ಡಬ್ಬಾ ಸಲಹೆಗೆ ಸರಕಾರ ಸ್ಪಂದಿಸಿದರೆ, “… ಫಲಶ್ರುತಿ”, “… ವರದಿ ಪರಿಣಾಮ” ಎಂದು ತಮ್ಮ ಬೆನ್ನನ್ನು ತಾವೇ ಚಪ್ಪರಿಸಿಕೊಳ್ಳುವ ಪತ್ರಕರ್ತ ಮಹಾಶಯರ ಪತ್ರಿಕೆಯಲ್ಲಿ ನಡೆಯುತ್ತಿರುವ ಅಧ್ವಾನಗಳಿಗೆಲ್ಲ ಇವರು ಮೂಕಸಾಕ್ಷಿಯಾಗಿರುತ್ತಾರೆ. ಇದಕ್ಕೊಂದು ಉತ್ತಮ ಉದಾಹರಣೆಯೆಂದರೆ, ಕಾರ್ಮಿಕ ಇಲಾಖೆಯ ಕಾನೂನನ್ನು ಗಾಳಿಗೆ ತೂರಿ ಇವರು ತಮ್ಮ ಕಚೇರಿಯಲ್ಲಿ ಕೆಲಸ ಮಾಡುವ ಯಾವ ಸಿಬ್ಬಂದಿಗೂ ಪಿಎಫ್, ಇಎಸ್ಐ ನಂಥ ಕನಿಷ್ಠ ಸೌಲತ್ತುಗಳನ್ನು ನೀಡಿರುವುದಿಲ್ಲ. ಸಂಬಳಕ್ಕಿಂತ ಇತರೇ ಆದಾಯ ಹೊಂದಿರುವ ಕೆಲ ಉನ್ನತ ವ್ಯಕ್ತಿಗಳಿಗೆ ಇದರ ಅಗತ್ಯವಿಲ್ಲದಿರಬಹುದು ಆದರೆ ಬಡಪಾಯಿಗಳಿಗೆ ಖಂಡಿತ ಇದರ ಅಗತ್ಯವಿದೆ. ಕಾನೂನು ಕೇವಲ ಗಾರ್ಮೆಂಟ್ ಕಾರ್ಖಾನೆ ಮಾಲಿಕನಿಗೆ ಮಾತ್ರವಲ್ಲ ಪತ್ರಿಕೆ ನಡೆಸುವ ಧಣಿಗೂ ಅನ್ವಯಿಸುತ್ತದೆ ಎಂದು ಇವರಿಗೆ ತಿಳಿಸಿ ಹೇಳುವವರಾರು?


ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: