ವಿಮರ್ಶಕಿಯ ಸಂಪಾದಕೀಯ: ಪತ್ರಕರ್ತರು ವದಂತಿಗಿರಣಿಗಳಾದಾಗ…

ಜನವರಿ 13, 2011

ಅವ್ರು ಈ ಪತ್ರಿಕೆ ಸೇರ್‍ತಾರಂತೆ, ಇವ್ರನ್ನು ೧೫ನೇ ತಾರೀಖು ಒದ್ದು ಹೊರಗೆ ಹಾಕ್ತಾರಂತೆ, ಇವ್ರಿಗೆ ಅವ್ರು ದುಡ್ಡು ಹಾಕಿ ಹೊಸ ಪೇಪರ್ ತರ್‍ತಾರಂತೆ, ಅವ್ರು ಮತ್ತು ಇವ್ರು ಇಬ್ರೂ ಸೇರಿ ಆ ಪತ್ರಿಕೆ ಸೇರೋದಕ್ಕೆ ಕಾಯ್ತಾ ಇದಾರಂತೆ, ಇವ್ರು ಒಂದು ಎರಡು ಮೂರು ನಾಲ್ಕು ಆಮೇಲಿನ್ನೇನು ಅಂತ ಹಾಡ್ತಾ ಇದಾರಂತೆ… ಇವ್ರ ಫೋನ್ ಸ್ವಿಚ್‌ಆಫ್… ಅವ್ರ ಮ್ಯಾನೇಜ್‌ಮೆಂಟ್ ಸ್ಟೇಕ್ ಇನ್ನು ಒಂದೇ ವಾರದಲ್ಲಿ ಹೆಚ್ಚಾಗುತ್ತಂತೆ….  ಅಕಸ್ಮಾತ್ ಅವ್ರು ಬಿಟ್ಟಿದ್ದೇ ಆದ್ರೆ ಈ ಪತ್ರಿಕೆಯಿಂದ ಇವ್ರು ಅಲ್ಲಿಗೆ ಹೋಗೋದಕ್ಕೆ ತಯಾರಿ ನಡೆದಿದೆಯಂತೆ…

ಇವ್ರೆಲ್ಲ ಯಾರು? ಇವ್ರ ಬಗ್ಗೆ ಬರೀತಾ ಇರೋರು ಯಾರು? ಎಸ್ ಎಂ ಎಸ್‌ಗಳನ್ನು ಹರಿಬಿಡ್ತಾ ಇರೋರು ಯಾರು? ಇದಕ್ಕೆಲ್ಲ ಏನು ಆಧಾರ? ನಂಗೊತ್ತಿಲ್ಲ.

ಕಳೆದ ಹತ್ತು ದಿನಗಳಿಂದ ಇಂಥದ್ದೇ ವದಂತಿಗಳನ್ನು ಗಿರಣಿಗಳಲ್ಲಿ ಅರೆದು ಅರೆದು ಹೊರೆ ಹರಿಬಿಡಲಾಗುತ್ತಿದೆ. ಕನ್ನಡ ಪತ್ರಿಕೋದ್ಯಮದಲ್ಲಿ ಏನೋ ಭಯಂಕರ ಬದಲಾವಣೆಗಳು ಆಗಿಬಿಡುತ್ತವೆ ಅನ್ನೋ ಕಲ್ಪನೆಯನ್ನು ಕೊಡೋ ಈ ವದಂತಿಗಳು ನಿಜವಾಗುವವರೆಗೂ ಟ್ರಾಶ್ ಎಂದೇ ಕರೆಯಬೇಕಷ್ಟೆ. ವದಂತಿಗಳನ್ನು ಆಧರಿಸಿ ಮ್ಯಾನೇಜ್‌ಮೆಂಟ್‌ಗಳು ನಿರ್ಧಾರ ತಗೋಳೋದೇ ಆಗಿದ್ರೆ…. ಆಹಾ…

ಎಂಥ ಮಜಾ ನೋಡಿ, ಸುದ್ದಿಯನ್ನು ಜನರಿಗೆ ತಲುಪಿಸೋ ಪರಮ ಪವಿತ್ರ ಕೆಲಸ ಮಾಡ್ತಾ ಇರೋ ಈ ಪತ್ರಕರ್ತರು ಹರಿದುಬಿಡ್ತಾ ಇರೋ ವದಂತಿಗಳೇನು…. ಇವುಗಳ ಸತ್ಯಾಸತ್ಯತೆ ಎಷ್ಟು? ವದಂತಿಗಳಿಗೇ ಬ್ಲಾಗುಗಳನ್ನು ಬಳಸಿಕೊಳ್ಳೋ ಹೊಸ ಪ್ರವೃತ್ತಿಗೆ ಏನು ಹೇಳೋಣ? ದಾಖಲೆಯಿಲ್ಲ, ಅಧಿಕೃತ ಹೇಳಿಕೆಯಿಲ್ಲ, ಕಣ್ಣಿಗೆ ಕಾಣುವ ಯಾವುದೇ ಬೆಳವಣಿಗೆಗಳೂ ಇಲ್ಲ. ಆದರೂ ಇವೆಲ್ಲ ಕ್ಷಣಕ್ಷಣಕ್ಕೂ ನಡೀತಾ ಇರೋ ವಿದ್ಯಮಾನಗಳು ಎಂದು ಮಾತನಾಡುವ ಪತ್ರಕರ್ತರು ನಮ್ಮ ನಡುವೆಯೇ ಇದ್ದಾರೆ. ನಿಜಘಟನೆಗಳನ್ನು ವರದಿ ಮಾಡುವವರು ಹೀಗೆ ಅತಿರಂಜಿತ ವದಂತಿಗಳನ್ನು ಬರೆಯುತ್ತಿರೋದು ನೋಡಿದರೆ ವಾಕರಿಕೆ ಬರುತ್ತದೆ.

ವಿಮರ್ಶಕಿ ಎಂದೂ ಇಂಥ ವದಂತಿಗಳನ್ನು ಬರೆಯುವ ಗೋಜಿಗೆ ಹೋಗದಿರಲು ನಿರ್ಧರಿಸಿದ್ದಾಳೆ. ನಡೆದ ಘಟನೆಗಳಷ್ಟೇ ವಿಮರ್ಶಕಿಗೆ ಆಧಾರ ಮತ್ತು ಮೂಲ. ಅದನ್ನು  ಬಿಟ್ಟು ವದಂತಿಗಳನ್ನು ಹರಡುವವರಿಗೆ ಆಕಾಶವಾಣಿಯಲ್ಲಿ ಬಿತ್ತರವಾಗುವಂತೆ ಎಚ್ಚರಿಕೆ ನೀಡಬೇಕಿದೆ. ವದಂತಿಗಳನ್ನು ಹರಡಬೇಡಿ, ವದಂತಿಗಳಿಗೆ ಕಿವಿಗೊಡಬೇಡಿ ಎಂದು ವಿನಂತಿಸಿಕೊಳ್ಳಬೇಕಿದೆ.

ಇಲ್ಲಿ ಅವರಿವರು ಆ ಸಂಸ್ಥೆ ಬಿಡುವ, ಸೇರುವ ವಿಷಯಗಳನ್ನು ಅತ್ಯಂತ ಜಾಣತನದಿಂದ ಹರಡುತ್ತಿರುವ ಕುತ್ಸಿತ ಮನಸ್ಸುಗಳಿವೆ ಎಂದೇ ಬಲವಾಗಿ ಅನ್ನಿಸುತ್ತದೆ. ಇಂಥ ವ್ಯಕ್ತಿಗಳನ್ನು ಹುಡುಕಿ ತದಕುವ ಕೆಲಸ ನಡೆಯಬೇಕಿದೆ.

ಒಂದೊಂದು ಪತ್ರಿಕೆಯೂ ಒಂದೊಂದು ಥರದ ಮ್ಯಾನೇಜ್‌ಮೆಂಟನ್ನು ಹೊಂದಿದೆ. ಉದಯವಾಣಿಯ ಆಡಳಿತ ವರ್ಗವು ನಿನ್ನೆ ಮೊನ್ನೆ ಸೇರಿದ ತಿಮ್ಮಪ್ಪ ಭಟ್ಟರನ್ನು ಸಂಸ್ಥೆಯಲ್ಲೇ ಮೂಲೆಗುಂಪಾಗಿಸುವಂಥ ಕ್ಷುದ್ರ ಸಂಸ್ಥೆಯಂತೂ ಅಲ್ಲ. ಕನ್ನಡಪ್ರಭದ ಮ್ಯಾನೇಜ್‌ಮೆಂಟ್ ಒಂದು ವರ್ಷದ ಹಿಂದೆ ನಡೆದ ಕ್ಷಿಪ್ರಕ್ರಾಂತಿಯಿಂದ ಕಂಗೆಟ್ಟಿದ್ದರೂ ಪತ್ರಿಕೆಯ ರೀಡರ್‌ಶಿಪ್ಪನ್ನು ಮೇಲೆತ್ತಿದ ಶಿವಸುಬ್ರಹ್ಮಣ್ಯರನ್ನು ಅಷ್ಟು ಸಲೀಸಾಗಿ ಸರಿಸಿಬಿಡುತ್ತದೆ ಎಂದು ನಂಬಬೇಕೆ? ಹಾಗೇನಾದರೂ ನಡೆದೀತು ಅಂದುಕೊಳ್ಳೋಣ. ಆಗ ಅದೊಂದು ದುರಂತವೇ ಹೊರತು ಸಹಜ ಘಟನೆಯಾಗಲಾರದು. ವಿಮರ್ಶಕಿಗೆ ಶಿವಸುಬ್ರಹ್ಮಣ್ಯರನ್ನು ಹೊಗಳಿ ಏನೂ ಆಗಬೇಕಿಲ್ಲ. ಎನ್ ಆರ್ ಎಸ್ ನ ಪ್ರಕಟಿತ ಅಧಿಕೃತ ಅಂಕಿ ಅಂಶಗಳೇ ಸಾಕಲ್ಲವೆ? ವಿಶ್ವೇಶ್ವರ ಭಟ್ಟರು ಪತ್ರಿಕೆಯನ್ನು ಮೇಲೆತ್ತಿದರು ಎಂದು ಎಷ್ಟೇ ನಂಬಬೇಕೆಂದರೂ, ಅದೇ ಹೊತ್ತು ಅವರೇ ಪತ್ರಿಕೆಯ ರೀಡರ್‌ಶಿಪ್ ಕುಸಿಯಲೂ ಕಾರಣರಾದರು ಎಂಬ ಮಾತನ್ನು ಯಾಕೆ ಒಪ್ಪಿಕೊಳ್ಳಬಾರದು? ಅಷ್ಟಿದ್ದಾಗ ಅವರನ್ನು ಯಾವುದೇ ಸಂಸ್ಥೆಯು ಕೆಂಪುಹಾಸಿನ ಸ್ವಾಗತ ನೀಡುತ್ತದೆ ಎಂದು ನಂಬಬೇಕೆ? ಹಾಗೆ ನಡೆಯಿತು ಅಂದುಕೊಳ್ಳೋಣ. ಹಾಗೆ ಸೇರಿಸಿಕೊಳ್ಳುವ ಮ್ಯಾನೇಜ್‌ಮೆಂಟ್‌ಗೆ ಕಾಮನ್‌ಸೆನ್ಸ್ ಇಲ್ಲ  ಎಂದೇ ಹೇಳಬೇಕಾಗುತ್ತದೆ. ಉನ್ನತ ಶಿಕ್ಷಣಕ್ಕೆ ಹೋಗಬಯಸಿ ರಾಜೀನಾಮೆ ನೀಡಿದ ಭಟ್ಟರು ಇನ್ನೂ ಭಾರತದಲ್ಲಿ ಯಾಕೆ ಇದ್ದಾರೆ ಎಂಬುದೇ ದೊಡ್ಡ ಪ್ರಶ್ನೆ.

ಪತ್ರಿಕೋದ್ಯಮದ ಬಗ್ಗೆ ಸದಾ ಅತ್ಯಂತ ಹಳೆಯ ದಾಖಲೆಗಳನ್ನೆಲ್ಲ ಎತ್ತಿ ಕಾಲಂ ಬರೆಯುತ್ತಿದ್ದ ಭಟ್ಟರೆಲ್ಲಿ? ಪ್ರತಾಪಸಿಂಹ, ಯಶವಂತ ಸರದೇಶಪಾಂಡೆಯವರ ನಿಯಂತ್ರಣದಲ್ಲಿ ತಮ್ಮ ವೆಬ್‌ಸೈಟನ್ನು ಬಿಟ್ಟುಕೊಟ್ಟು ಹಾಯಾಗಿರುವ ಭಟ್ಟರೆಲ್ಲಿ? ಪತ್ರಿಕೋದ್ಯಮದ ಬಗ್ಗೆ, ತಮ್ಮ ಅನುಭವಗಳನ್ನು ಬರೆಯಲು ಈಗ ಅವರಿಗೆ ಸಕಾಲವಾಗಿತ್ತು. ವ್ಯಕ್ತಿಗತ ನಿಂದನೆ, ಕಟಕಿಗೇ ತಮ್ಮ ವೆಬ್‌ಸೈಟನ್ನು ಮೀಸಲಾಗಿಟ್ಟ ಅವರ `ಕ್ವಾಲಿಟಿ ಪಾಲಿಸಿ’ ಹೇಸಿಗೆ ತರುತ್ತದೆ. ವೆಬ್‌ಜಗತ್ತಿಗೆ ಬಂದಮೇಲೆ ವೆಬ್ ಮಾಧ್ಯಮದ ಪ್ರಾಥಮಿಕ ಹೊಣೆಗಾರಿಕೆಗಳನ್ನೂ ಅರಿಯದೇ ಹೋದ ಭಟ್ಟರ ಬಗ್ಗೆ ಕನಿಕರ ಮೂಡುತ್ತದೆ. ಅವರು  ಹಾಗೇ, ಭಟ್ಟಂಗಿಗಳ ವೇದಘೋಷಗಳ ಗುಂಗಿನಲ್ಲೇ ಇದ್ದರೆ ಒಳ್ಳೆಯದು; ಆದಷ್ಟು ಬೇಗ ಆಟೋಮ್ಯಾಟಿಕ್ ಆಗಿ ಡಿಲೀಟ್ ಆಗುತ್ತಾರೆ!

ಅವರ ಸಂಪಾದಕತ್ವದಲ್ಲಿ ನಡೆದ ಸುದ್ದಿಗಳ ಭಾನಗಡಿಯ ಬಗ್ಗೆ ವಿಮರ್ಶಕಿಯು ಬರೆದ ಯಾವ ಬ್ಲಾಗಿಗೂ ಅವರು ಉತ್ತರಿಸುವ ಗೋಜಿಗೆ ಹೋಗಿಲ್ಲ. ಈಗಲೂ ಅವರು ಮೌನಿಯಂತೆ. ಅವರ ಬಾಯಿ ತೆರೆದಾಗ ಏನೆಲ್ಲ ಘನಘೋರ ಸತ್ಯಗಳು ಹೊರಬೀಳುತ್ತವೆ ಎಂದು ವಿಮರ್ಶಕಿಯಂತೂ ಕಾತರಳಾಗಿಲ್ಲ. ವೆಬ್ ಜಗತ್ತಿಗೆ ಬಂದಮೇಲಾದರೂ ಸ್ವಲ್ಪ ಹೊಸ ಜರ್ನಲಿಸಮ್ ಪಾಠ ಕಲಿತರೆ ಒಳ್ಳೆಯದು ಎಂದಷ್ಟೆ ಹೇಳಬಹುದು.

ಮೀಡಿಯಾ ವಾಚ್

ಇವತ್ತಿನ (೧೩.೧.೨೦೧೧) ಕನ್ನಡಪ್ರಭದಲ್ಲಿ (http://www.kannadaprabha.com/pdf/epaper.asp?pdfdate=1/13/2011) ಐ ಪಿ ಎಲ್ ಸುದ್ದಿಯನ್ನು ಹಾಕುವಾಗ ಚೀರು ಹುಡುಗಿಯರ ಚಿತ್ರವನ್ನೇ ಮೂರು ಕಾಲಂ ಬಳಸಿಕೊಂಡಿದ್ದು ನೋಡಿದರೆ ನಮ್ಮ ಕ್ರೀಡಾವರದಿ ಪುಟಗಳು ರತಿಕ್ರೀಡಾವರದಿಯಾಗುತ್ತಿದೆ ಎಂಬ ವಾದಕ್ಕೆ ಬಲ ಸಿಗುತ್ತಿದೆ. ಐ ಪಿ ಎಲ್ ತನಿಖೆಗೂ ಈ ಹುಡುಗಿಯರ ಸ್ತನಪ್ರದರ್ಶನಕ್ಕೂ ಯಾವುದೇ ಸಂಬಂಧ ಇದ್ದ ಬಗ್ಗೆ ಯಾವ ಸುಳಿವೂ ವಿಮರ್ಶಕಿಗೆ ಸಿಕ್ಕಿಲ್ಲ. ಈ ಭಯಂಕರ ಐಡಿಯಾ ಮಾಡಿದ (ಅಂದಹಾಗೆ `ಐಡ್ಯಾ ಮಾಡ್ಯಾರ’ ಅನ್ನೋದು ಯಶವಂತ ಸರದೇಶಪಾಂಡೆಯವರ ಸ್ವಂತ ಐಡ್ಯಾ ಎಂಬ ವದಂತಿ ಈಗ ಹಬ್ಬುತ್ತಿದೆ!) ಕ್ರೀಡಾ ವರದಿಗಾರರನ್ನು ಹೇಗೆ ವಿಚಾರಿಸಿಕೊಳ್ಳಬೇಕೋ ಗೊತ್ತಾಗುತ್ತಿಲ್ಲ.

 

Advertisements

One Response to “ವಿಮರ್ಶಕಿಯ ಸಂಪಾದಕೀಯ: ಪತ್ರಕರ್ತರು ವದಂತಿಗಿರಣಿಗಳಾದಾಗ…”

  1. sheela Says:

    Akkoo, Kharene helak hathiya neenu..nanage eega Neelu aunty nenapagade..akee ega erabekagiththu…


ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: